1860-1936. ಕರ್ಣಾಟಕ ರಾಮಾಯಣ ಸಂಗ್ರಹ, ಯದುನೃಪವಿಜಯ ಎಂಬ ಗ್ರಂಥಗಳ ಕರ್ತೃ. ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಹಗಿನವಾಳು ಇವರ ಜನ್ಮಸ್ಥಳ.  ಇವರು ತಮ್ಮ ಎರಡು ಕಾವ್ಯಗಳ ಪೀಠಿಕಾಸಂಧಿಗಳಲ್ಲಿಯೂ ಗೋವದ ಲಿಂಗವನ್ನು ಸ್ತೋತ್ರಮಾಡಿರುವುದರಿಂದ ಇವರ ಕುಲದೈವ ಗೋವದ ಲಿಂಗವೆಂದೂ ಇವರ ಪೂರ್ವಜರು ಗೋವ ಪ್ರಾಂತದಿಂದ ಬಂದು ಮೈಸೂರು ನಾಡಿನಲ್ಲಿ ನೆಲಸಿದರೆಂದೂ ತಿಳಿದುಬರುತ್ತದೆ. ಇವರ ತಂದೆ ದೊಡ್ಡಲಿಂಗರಾಜ ಅರಸು. ಲಿಂಗರಾಜ ಅರಸು ಅವರ ವಿದ್ಯಾಭ್ಯಾಸ ಹಗಿನವಾಳಿನಲ್ಲೇ ನಡೆಯಿತು.  ಏಳು ವರ್ಷದವರಿದ್ದಾಗಲೇ ಮೈಸೂರು ಅರಮನೆಯಲ್ಲಿ ರಾಜಕುಮಾರ ಚಾಮರಾಜ ಒಡೆಯರ ಸಂಗಡಿಗರಾಗಿ ಅರಮನೆ ಸೇರುವ ಅವಕಾಶ ಲಭಿಸಿತು. ಚಿಕ್ಕ ವಯಸ್ಸಿನಿಂದಲೂ ಅರಮನೆಯ ಭೋಗಜೀವನದಲ್ಲಿ ಬೆಳೆದರು. ಅನಂತರ ಮರಾಮತ್ ಇಲಾಖೆಯಲ್ಲಿ ಮೊಖ್ತೇಸರ್ ಆಗಿ ತುಂಬ ಶ್ರದ್ಧೆಯಿಂದ ರಾಜಕಾರ್ಯವನ್ನು ನಿರ್ವಹಿಸಿದರು. ತಮ್ಮ 68ನೆಯ ವಯಸ್ಸಿನಲ್ಲಿ ಉದ್ಯೋಗದಿಂದ ನಿವೃತ್ತರಾಗಿ 1936ರಲ್ಲಿ ನಿಧನರಾದರು.

ಇವರು ವಿದ್ವತ್ಪ್ರೇಮಿಯೂ ಸಾಹಿತ್ಯಾಭಿಮಾನಿಯೂ ಸ್ವಯಂ ಕವಿಯೂ ಆಗಿದ್ದರು.  ಆಸ್ಥಾನದ ಮಹಾವಿದ್ವಾಂಸರಾದ ಪಿ.ಆರ್. ಕರಿಬಸವಶಾಸ್ತ್ರೀ, ತಿಮ್ಮಪ್ಪಯ್ಯಶಾಸ್ತ್ರೀ ಮೊದಲಾದವರು ಇವರ ಪರಮ ಆಪ್ತಮಿತ್ರರು.  ಇವರಿಗೆ ಛಂದೋಲಂಕಾರಶಾಸ್ತ್ರಗಳಲ್ಲಿ ವಿಶೇಷ ಪಾಂಡಿತ್ಯವಿತ್ತು.  ಕನ್ನಡ, ಸಂಸ್ಕøತ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸಾಕಷ್ಟು ಪಾಂಡಿತ್ಯವಿತ್ತು.  ಪ್ರಾಚೀನ ಕಾವ್ಯ ವ್ಯಾಸಂಗದಲ್ಲಿ ಅತೀವ ಆಸಕ್ತಿಯಿತ್ತು.

ಇವರು ನಾಲ್ವಡಿ ಕೃಷ್ಣರಾಜ ಒಡೆಯರ ಇಪ್ಪತ್ತೆಂಟನೆಯ ವರ್ಷ ವರ್ಧಂತಿಯ ಜ್ಞಾಪಕಾರ್ಥವಾಗಿ 1912ರಲ್ಲಿ ರಾಮಾಯಣದ ಬಾಲಕಾಂಡ ವನ್ನು ಭಾಮಿನೀಷಟ್ಟದಿಯಲ್ಲಿ ರಚಿಸಿ ರಾಜಸನ್ನಿಧಿಗೆ ಅರ್ಪಿಸಿದರು.  ಮಹಾರಾಜರು ಬಾಲಕಾಂಡವನ್ನು ಪರಾಮರ್ಶಿಸಿ ಅದು ಜನಸಾಮಾನ್ಯರಿಗೂ ಓದಲು ಸುಲಭವಾಗಿಯೂ ಲಲಿತವಾಗಿಯೂ ಇದ್ದುದರಿಂದ ಅದೇ ಶೈಲಿಯಲ್ಲಿ ರಾಮಾಯಣವನ್ನೆಲ್ಲ ಪೂರ್ತಿಯಾಗಿ ಬರೆದು ಅಚ್ಚು ಮಾಡಿಸಿದರೆ ಬಹಳ ಪ್ರಯೋಜನವಾಗುವುದೆಂದು ತಿಳಿಸಿದರು.  ಅದರಂತೆಯೇ ಇವರು ಕರ್ಣಾಟಕ ರಾಮಾಯಣ ಸಂಗ್ರಹ ಎಂಬ ಕಾವ್ಯವನ್ನು 1919ರಲ್ಲಿ ರಚಿಸಿ ಮಹಾರಾಜರಿಗೆ ಅರ್ಪಣೆ ಮಾಡಿದರು. ಇದರಿಂದ ಇವರಿಗೆ ಮೈಸೂರು ದರ್ಬಾರಿನಿಂದ ರಾಜಕವಿಭೂಷಣ ಎಂಬ ಪ್ರಶಸ್ತಿಯೂ ರಾಜಸನ್ಮಾನವೂ ಲಭಿಸಿದುವು. ಕರ್ಣಾಟಕ ರಾಮಾಯಣ ಸಂಗ್ರಹದಲ್ಲಿ 6 ಕಾಂಡಗಳೂ 1,764 ಪದ್ಯಗಳೂ ಇವೆ.  1924ರಲ್ಲಿ ಯದುನೃಪವಿಜಯ ಎಂಬ ಪದ್ಯಕಾವ್ಯವನ್ನು ಷಟ್ಟದಿಛಂದಸ್ಸಿನಲ್ಲಿ ರಚಿಸಿ, ಮಹಾಮಾತೃಶ್ರೀ ವಾಣಿವಿಲಾಸ ಅವರಿಗೆ ಅರ್ಪಣೆಮಾಡಿದರು. ಈ ಕಾವ್ಯದಲ್ಲಿ ಮೈಸೂರು ಅರಸರ ಮೂಲಪುರುಷರಾದ ಯದುರಾಯ ಕೃಷ್ಣರಾಯ ಸಹೋದರರ ಚರಿತ್ರೆಯಿದೆ. ಅವರು ಮೈಸೂರಿಗೆ ಬಂದು ರಾಜ್ಯಾಧಿಕಾರವನ್ನು ವಹಿಸಿಕೊಂಡ ಬಗೆಯನ್ನು ವಿವರವಾಗಿ ಚಿತ್ರಿಸಲಾಗಿದೆ. ಪೀಠಿಕಾ ಸಂಧಿಯೂ ಸೇರಿದಂತೆ 7 ಸಂಧಿಗಳು 282 ಪದ್ಯಗಳೂ ಇವೆ.

ವಿದ್ಯಾಪಕ್ಷಪಾತಿಯಾದ ಇವರು ಕವಿತಾರಚನೆಯಲ್ಲಿ ಸಮರ್ಥರಾದ ಸಂಸ್ಕೃತ ವಿದ್ಯಾರ್ಥಿಗಳಿಗೆ ಪಾರಿತೋಷಿಕವನ್ನು ಕೊಟ್ಟು ಪ್ರೋತ್ಸಾಹಿಸಲು ಮೈಸೂರು ಶ್ರೀಮನ್ಮಹಾರಾಜ ಸಂಸ್ಕೃತ ಮಹಾಪಾಠಶಾಲೆಯ ವಿದ್ಯಾರ್ಥಿಗ ಳಿಗೆ ಉಪಯೋಗವಾಗುವಂತೆ ತಮ್ಮ ತಂದೆಯ ಹೆಸರಿನಲ್ಲಿ ನಿಧಿಯೊಂದನ್ನು ಸ್ಥಾಪಿಸಿದರು. ಇವರು 1934ರಲ್ಲಿ ಮೈಸೂರು ಕರ್ನಾಟಕ ಸಂಘದ ಅಧ್ಯಕ್ಷರೂ 1926ರಲ್ಲಿ ಬಳ್ಳಾರಿಯಲ್ಲಿ ನಡೆದ ಅಖಿಲಕರ್ನಾಟಕ ಕೀರ್ತನ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು.	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ